Tuesday 7 May 2019

ಬಲಿ ಪಡೆಯುವವನು ದೇವರೆ? ದೆವ್ವವೆ?

ದೇವರೆಂದರೆ,  ನಮ್ಮ ಅಂದರೆ ಜನರ ಪ್ರಕಾರ?

ಪ್ರೇಮ, ಕರುಣಾಸಾಗರ, ಶರಣಾಗತ ರಕ್ಷಕ, ಆಪದ್ಬಾಂಧವ, ದೀನಬಂಧು,ಸೃಷ್ಟಿಕರ್ತ, ತಂದೆ,  ತಾಯಿ , ಬಂಧು..

ಹಾಗಾದರೆ ನಾವು ರಾಕ್ಷಸರೆನ್ನುವುದು ಯಾರನ್ನು?

ಹಸುಳೆ, ಮೂಕ ಪ್ರಾಣಿ, ಹೆಣ್ಣು, ದೀನ , ನವಜಾತ ಶಿಶು ವಿನ ತಾಯಿ- ಯಾವುದನ್ನು ಪರಿಗಣಿಸದೆ ಹುರಿದು ಮುಕ್ಕಿ ತಿನ್ನುವವನು, ಹಸಿ ರಕ್ತ ಕುಡಿಯುವವನು. ಅಮಾನುಷವಾಗಿ ಜೀವ ತೆಗೆಯುವವನು.

ಮನುಷ್ಯ???? ಮಾನವ ಸಹಜ ಭಾವಗಳೊಂದಿಗೆ ಇವೆರಡ ಮಧ್ಯದಲ್ಲಿರುವವನು ಮಾನವ. ಅದನ್ನು ಮೀರಿ ಸಾಗಿದರೆ, ಈ ಮೇಲಿನ ಹೇಳಲಾದ ದೇವರ ಸೂಚಕಗಳಿದ್ದರೆ ಅವನು ದೈವತ್ವಕ್ಕೆ ಏರಿದ ಎಂದರ್ಥ. ಅದೇ ಕೆಳಗಿಳಿದರೆ ರಾಕ್ಷಸತ್ವಕ್ಕೆ ಇಳಿದ ಎಂದು.

ಈ ಮಾನವ/ ಮನುಷ್ಯ ಎಂಬ ಪದದಲ್ಲೇ ಅವನ/ಳ ಬಗ್ಗೆ ಹೇಳಲಾಗಿದೆ. ಓಹೋ ಅದಾ ಮನುವಿನ ಸಂತಾನ ಎಂದು ಬಿಡಬೇಡಿ. ಮಾನವೀಯತೆ ಹೊಂದಿರುವವನೇ ಮನುಷ್ಯ.  ಅಥವಾ ಮನುಷ್ಯತ್ವ ಎಂಬುದೊಂದು ಪರಿಕಲ್ಪನೆ ನಮ್ಮಲ್ಲಿದೆ. 

ಇಷ್ಟೆಲ್ಲ ಪೀಠಿಕೆ ಏಕೆಂದರೆ ...ನಮ್ಮ ಕುಮಟಾ ತಾಲೂಕಿನ ಕಡಲ ತಡಿಯ ಗ್ರಾಮವೊಂದರ ಪ್ರಖ್ಯಾತ  ದೇವಿಯ ಜಾತ್ರೆ ಇತ್ತೀಚಿಗೆ ನಡೆಯಿತು. ದೇವಸ್ಥಾನವನ್ನು ಮುಜರಾಯಿ ಇಲಾಖೆ ವಹಿಸಿಕೊಂಡಿದೆ. ಇದರರ್ಥ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಆಗುಹೋಗುಗಳು ಸರಕಾರಕ್ಕೆ ಸಂಬಂಧಿಸಿರುತ್ತದೆ ಎಂಬುದು. ದೇವಸ್ಥಾನದ ಆಡಳಿತವನ್ನು ವಹಿಸಿಕೊಂಡ ಇಲಾಖೆ ಒಂದು ಬೋರ್ಡನ್ನು ನೇತು ಹಾಕಿತು. ಈ ದೇವಸ್ಥಾನ ನಮ್ಮ ವ್ಯಾಪ್ತಿಗೆ ಬಂದಿರುವುದರಿಂದ ಇಲ್ಲಿ ಪ್ರಾಣಿ ಬಲಿ ನಿಷಿದ್ಧ, ಇದನ್ನು ಉಲ್ಲಂಘಿ,ಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು.  ಸರಿ ಜಾತ್ರೆ ಬಂದೇ ಬಿಟ್ಟಿತು. ಸಂಪ್ರದಾಯದಂತೆ ಮರುದಿನ ಊರಲ್ಲಿ ದೇವರಿಗೆ ಪ್ರಾಣಿ ಬಲಿ ನೀಡಬೇಕು. ಜನ ರೊಚ್ಚಿಗೆದ್ದರು. ಮಾಡಿಯೇ ತೀರುತ್ತೇವೆಂದು ನಿಂತರು.  ಮಾಡಿಯೇ ಬಿಟ್ಟರು. ಯಾವ ಸರಕಾರವೂ ಅದನ್ನು ತಡೆಯಲು ಅಲ್ಲಿರಲಿಲ್ಲ.  ಸರಕಾರದ ಪ್ರತಿನಿಧಿಗಳಾಗಿ ಕಾನೂನು ಪರಿಪಾಲನೆಗೆ ಇರಬೇಕಾದ ಪೊಲೀಸರೆಂಬ ಆರಕ್ಷಕರಂತೂ ಅದಾಗಲೇ ನಾಪತ್ತೆಯಾಗಿ ಬಿಟ್ಟಿದ್ದರು.

ಮತ್ತೆ ರಕ್ತದೋಕುಳಿ ಹರಿದಿತ್ತು. ಮೂಕ ಪ್ರಾಣಿಗಳು ಆಕ್ರಂದನ ಅಮ್ಮನ ಕಿವಿಯಲ್ಲಿ ಠೇಂಕರಿಸಿತ್ತು. ಪಾಪ ನಾಶಿನಿ ಎಂಬ ಅಘನಾಶಿನಿ ನೀರು ಪಾಪದ ರಕ್ತ ಕಲಕಿ ಕೆಂಪಾಗಿ ಹರಿದಿತ್ತು. ಮತ್ತದು ಸಮುದ್ರ ಸೇರಿ ಅದರಲ್ಲಿ ಮಿಳಿತವಾಗಿ ನೀರಲ್ಲಿ ನೀರಾಗಿ ಹೇಳ ಹೆಸರಿಲ್ಲದಂತೆ ಮರೆಯಾಯ್ತು ಕೆಂಪನೆಯ ರಕುತ.

ಈ ಮೂಕ ಪ್ರಾಣಿಗಳ ನೆತ್ತರ ಹೋಲಿ ಹಲವರಿಗೆ ಸಮಾಧಾನ ತಂದಿರಬಹುದು. ಕೊನೆಗೂ ನಮ್ಮ ಸಂಪ್ರದಾಯವನ್ನುಳಿಸಿಕೊಂಡೆವು ಎಂಬ ಖುಷಿ ಅವರಿಗೆ. ಆದರೆ  ಇನ್ನು ಮೇಲೆ ಮೂಕ ಪ್ರಾಣಿಗಳ ಸಾಮೂಹಿಕ ಹತ್ಯೆ ನಡೆಯದೆಂಬ ನಂಬಿಕೆಯಲ್ಲಿದ್ದ, ಬೆರಳೆಣಿಕೆಯಷ್ಟು ಮಂದಿಗೆ ನೋವನ್ನು ತಂದಿದ್ದಂತೂ ಸತ್ಯ.

ಇಲ್ಲೇಳುವ ಪ್ರಶ್ನೆ

ವಶಕ್ಕೆ ಪಡೆದು ಬೋರ್ಡು ನೇತು ಹಾಕಿದರಾಯಿತೇ? ಪ್ರಾಣಿ ಬಲಿ ಎಂಬ ಅನಿಷ್ಠ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಲ್ಲವೇ. ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲವುದು ಸರಕಾರವೇ....

ಮನುಷ್ಯರೆನಿಸಿಕೊಂಡ ಊರ ಜನರೇ....

ಪುರಾತನ ಕಾಲದಲ್ಲಿ ನರ ಬಲಿ ಇತ್ತು. ವಿಶ್ವಾಮಿತ್ರ ಸೇರಿದಂತೆ ಅನೇಕ ಮಹಾತ್ಮರಿಂದ ಅದು ನಿಂತು ಹೋಯಿತು. ಅದು ಸಂಪ್ರದಾಯವಲ್ಲವೇ, ಅಯ್ಯಯ್ಯೋ ದೇವರು ಮುನಿದಾನು. ಅದನ್ನು ಶುರು ಹಚ್ಚಿಕೊಳ್ಳಿ....

ಸನಾತನ ಧರ್ಮ ಶಾಂತಿ, ದಯೆಯ ಧ್ಯೋತಕ. ಅದಕ್ಕೆ ಕಪ್ಪುಚುಕ್ಕಿ ತರುತ್ತಿರುವುದು ನಿಮ್ಮಂತಹ ಮೌಢ್ಯ ಮನಸ್ಸುಗಳೇ..

ಮನುಷ್ಯನಷ್ಟೇ ಅಲ್ಲ. ಪ್ರಾಣಿ ಪಕ್ಷಿಗಳಿಗೂ ಆ ದೇವರು ತಂದೆ-ತಾಯಿ. ಅವನ ಮಕ್ಕಳ ಬಲಿ ಅವನಿಗೆ ಬೇಕೆ? ತನ್ನ ಮಕ್ಕಳ ರಕ್ತವನ್ನೇ ಕುಡಿದರೆ ಆಕೆ ಹೆತ್ತವಳೆನಿಸುತ್ತಾಳಾ?

ಜೀವ ನೀಡಲು ಸಾಧ್ಯವಿಲ್ಲದ ನಿಮಗೆ ಜೀವ ತೆಗೆಯುವ ಹಕ್ಕು ನೀಡಿದ್ದು ಯಾರು?

ನಿಮಗೆ ಮಾಂಸ ತಿನ್ನುವ ಚಪಲಕ್ಕೆ ದೇವರ ನೆಪವನ್ನಿಟ್ಟುಕೊಂಡು ಕುತ್ತಿಗೆ ಕತ್ತರಿಸಿ ಅವನಿಗೆ ಅಪಮಾನ ಮಾಡಬೇಡಿ. ಮೂಕ ಪ್ರಾಣಿಗಳ ಆಕ್ರಂದನಕ್ಕೆ ಕೇಕೇ ಹಾಕುವವರು ಮನುಷ್ಯರಲ್ಲ, ರಾಕ್ಷಸರು. ಹಾಗೆಯೇ ಆ ರಕ್ತವನ್ನು ನೀವು ಪೂಜಿಸುವ ದೇವರು ಬಯಸುತ್ತಾನೆಂದರೆ ಅವನನ್ನು ದೇವರೆನ್ನಲಾಗದು, ರಾಕ್ಷಸನೆನ್ನುತ್ತಾರೆ.

ನಾವು ನಂಬಿದ, ಪೂಜಿಸುವ ದೇವರಿಗೆ ನಿಮ್ಮ ಸ್ವಾರ್ಥಕ್ಕೆ, ಚಪಲಕ್ಕೆ, ಮೌಢ್ಯಕ್ಕೆ ರಾಕ್ಷಸನ ಪಟ್ಟ ನೀಡದಿರಿ....ನೀವು ಮನುಷ್ಯರಾಗೇ ಇರಿ, ದೇವರಿಗೆ ರಾಕ್ಷಸನ ಹಣೆಪಟ್ಟಿ ನೀಡುವ ಪಾಪ ನಿಮಗೆ ತಟ್ಟಿತು.. ಅಲ್ಲ ತಟ್ಟುತ್ತಲೇ ಇದೆ...

Sunday 14 January 2018

ನೀ ನಿ....ಲ್ಲದ ಮಕರ ಸಂಕ್ರಮಣ




ಸೂರ್ಯ ತನ್ನ ಪಥವನ್ನು ಬದಲಿಸುವವರೆಗೂ ಕಾಯುತ್ತೇನೆ ಎಂದಿದ್ದ ನೀ, ಅದಕ್ಕೂ ಮುನ್ನವೇ ಪಥವ ಬದಲಿಸಿ ನಡೆದಾಗಿದೆ.  ನಿನ್ನ ಅಗಲಿಕೆ, ಇಲ್ಲ ಜತೆಗೆ ಎಂಬ ಪದಗಳ ಬಳಕೆ ಕಷ್ಟ ಸಾಧ್ಯ.  ನಿದ್ದೆ ಎಂಬ ಮಾಯೆಯ ಗುಂಗಿನಲ್ಲಿದ್ದಾಗಲೇ ದೇಹವೆಂಬ ಅರಿವೆಯನ್ನು ತೊರೆದು ಹೇಳದೇ ಹೊರಟ ನೀ ಹಿಂತಿರುಗಿ ನೋಡದೆ ನೇರವಾಗಿ ನಡೆದುಬಿಟ್ಟೆ. ಸದಾ ಜತೆಗಿರುತ್ತೇನೆಂದ ನೀ ಒಂದೇ ಒಂದು ಕುರುಹನ್ನು ಕೊಡದೇ ಎಲ್ಲಿದ್ದೀಯಾ ಅಪ್ಪ????


ನೀ ಅಗಲಿ ಮತ್ತೆ 3 ದಿನಗಳಲ್ಲಿ ಬರೋಬ್ಬರಿ ಒಂದು ತಿಂಗಳು ಅಪ್ಪ. ನೀ ದೈಹಿಕವಾಗಿ ಜತೆಗಿಲ್ಲದೆ ಆಚರಿಸುತ್ತಿರುವ ಮೊದಲ ಹಬ್ಬವಿದು. ಮುಂಬರುವ ಉಳಿದೆಲ್ಲ ಹಬ್ಬಗಳಂತೆ, ಈ ಸಂಕ್ರಮಣದಲ್ಲೂ ನಿನ್ನದೇ ಛಾಪು, ನಿನ್ನದೇ ನೆನಪು.

ನಿನ್ನ ಈ ಆನಂದಿ, ಸಾಯ್ಬೀಣ್ ಚಿಕ್ಕಂದಿನಿಂದ ಇಲ್ಲಿಯವರೆಗೂ ಹಬ್ಬಗಳ ಸಮಯದಲ್ಲಿ ನಿನ್ನ ಹಿಂದೆ ಸುತ್ತಿದ್ದೇ. ಹಬ್ಬ-ಹರಿದಿನಗಳ ಆಚರಣೆಯಲ್ಲಿ ದೇವರ ಪೂಜೆ ಮಾಡೋವಾಗ ನಾ ಜತೆಗಿಲ್ಲವೆಂದರೆ ಎಲ್ಲೋಗಿ ಸತ್ಲೋ ಎಂದು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದೆ ಅಲ್ವಾ ಅಪ್ಪ.

ನಾ ದೂರದ ಚೆನ್ನೈಗೆ ಹೋಗೋವರೆಗೂ ಪ್ರತಿವರ್ಷ ಮಕರ ಸಂಕ್ರಮಣವನ್ನಾಚರಿಸಿದ್ದು ನಿನ್ನ ಜತೆಗೇನೆ. ಬ್ರಾಹ್ಮಿ ಮಹೂರ್ತದಲ್ಲಿ ನನ್ನನ್ನೆಬ್ಬಿಸಿ ಬಿಡುತ್ತಿದ್ದೆ ನೀ. ತಣ್ಣೀರೋ, ಬಿಸಿ ನೀರೋ ಯಾವುದೋ ಒಂದು ನೀರನ್ನು ತಲೆ ಮೇಲಿಂದ ಸುರಿದುಕೊಂಡು ಬೆಣ್ಣೆಹೊಂಡ ಬೆಟ್ಟದಂಚಿನಿಂದ ಮೇಲೇಳೋ ಸೂರ್ಯನಿಗಾಗಿ ತಲೆ ಬಗ್ಗಿಸಿ, ಕಣ್ಣನ್ನು ಹಿರಿ-ಕಿರಿಯಾಗಿಸಿ ಇಣುಕುತ್ತಿದ್ದೆ. ನನ್ನದು ಅದೇ ಕಥೆ. ತುಸು ಹೇಮವರ್ಣ ದಿಗಂತದಂಚಿನಲ್ಲಿ ಗೋಚರಿಸುತ್ತಿದ್ದಂತೆ ನಮ್ಮಿಬ್ಬರ ಬೊಗಸೆಯಲ್ಲಿ (ಒಮ್ಮೊಮ್ಮೆ ಅಣ್ಣನು ಇರುತ್ತಿದ್ದ) ನೀರು.    ಪಥ ಬದಲಿಸೋ ಸೂರ್ಯ ಪೂರ್ವದಾಕಾಶದಂಚಿನಿಂದ ಎದ್ದೇಳುವ ಮುನ್ನವೇ ಅವನಿಗೆ ನಮ್ಮ ಸ್ವಾಗತ.  ಓಂ ಭೂರ್ಭುವಃ ಸ್ವಃ... ಮಂತ್ರ ಪಠಿಸುತ್ತ  ಭುವಿಗೆ ಬೆಳಕ ನೀಡುವ ಭಾಸ್ಕರನಿಗೆ ಅರ್ಘ್ಯವರ್ಪಿಸಿ ನಮನ, ಕೃತಜ್ಞತೆ ಸಲ್ಲಿಸುತ್ತಿದ್ದೆವು... ಬಳಿಕ ನೀ ಕುಟ್ಟಿಟ್ಟ ಬಿಳಿ ಎಳ್ಳನ್ನು ಮೈಗೆ ತಿಕ್ಕಿಕೊಂಡು ಬಿಸಿನೀರ ಸ್ನಾನ. ನಿನ್ನ ಪೂಜೆ, ತೀರ್ಥ ಪ್ರಸಾದ. ಸಂಕ್ರಾಂತಿ ಕಾಳು(ಎಳ್ಳುಬೆಲ್ಲ)ವನ್ನು ನಿನಗೆ ಆಯಿಗೆ ಕೊಟ್ಟು ನಮಸ್ಕರಿಸಿ ಎಳ್ಳುನೀರು ಕುಡಿದು ತಿಂಡಿ, ವಿಶೇಷ ಊಟ. ಸಂಜೆ ದೇವಸ್ಥಾನಕ್ಕೆ ಹೋಗಿ ತಾಯಿ ಸನ್ನಿಧಿಯಲ್ಲಿ ಎಳ್ಳುಬೆಲ್ಲವನ್ನಿಟ್ಟು ಬಳಿಕ ಎಲ್ಲರಿಗೂ ಹಂಚುವುದು...

ಮತ್ತೀಗ...ವರ್ಷದ ಮೊದಲ ಹಬ್ಬ..... ಜತೆಗೂಡಿ ಸೂರ್ಯನಿಗೆ ಅರ್ಘ್ಯವರ್ಪಿಸೋ ಮುನ್ನವೇ ನಿನ್ನ ಬಾಯಲ್ಲಿ ತುಳಸೋದಕವನ್ನು ಬಿಟ್ಟಾಗಿದೆ.  ಈ ಕಾಂಕ್ರೀಟ್ ಕಾಡಲ್ಲಿ ಸೂರ್ಯ ಹುಟ್ಟುವ ಪೂರ್ವ ದಿಕ್ಕು ಯಾವುದೆಂದು ನನಗೆ ಕಾಣುವುದಿಲ್ಲ. ಆದರೂ ನಿನ್ನಾತ್ಮಕೆ ನೋವಾಗಬಾರದೆಂದು ಸೂರ್ಯನೇಳುವ ಮುನ್ನವೇ ಬೊಗಸೆಯಲ್ಲಿ ಉದಕವನ್ನು ಹಿಡಿದು ನಿಲ್ಲಬೇಕೆಂದುತೊಂಡೆ. 6.30 ಆದರೂ ಕತ್ತಲೆ ಇತ್ತು. ಒಮ್ಮೆ ಹೊರಗೋಗಿ ನೋಡಿದೆ. ಸೂರ್ಯಮಾಮ ನಿದ್ದೆ ಬಿಟ್ಟಿಲ್ಲ ಎನ್ನಿಸಿತ್ತು.  ತಡವಾಗಿ ಮಲಗಿದ್ದಕ್ಕೆ ನನಗೂ ನಿದ್ದೆ ಬಿಟ್ಟಿರಲಿಲ್ಲ. ನೀ ಅರ್ಥ ಮಾಡಿಕೊಳ್ಳುತ್ತೀಯ ಎಂದು ಮನದಲ್ಲೇ ಬಗೆದು ಮತ್ತೆ ಚಾದರ್ ಎಳೆದು ಮಲಗಿಬಿಟ್ಟೆ. ನಿದ್ದೆ ಹತ್ತಲಿಲ್ಲ. ಮತ್ತೆದ್ದು ಹೊರಗೆ ಹೋದಾಗ ಶನಿಪಿತ ಬಿಸಿಲ ಹರಡಿದ್ದ. ತಿಲತಿಕ್ಕಿಕೊಂಡು, ತಿಲಬೆರೆತ ಸ್ನಾನ ಮುಗಿಸಿ ಮಂತ್ರ ಪಠಿಸಿ ಯಾವುದೋ ಒಂದು ದಿಕ್ಕಿಗೆ ಮುಖಮಾಡಿ ಬಿಸಿಲನ್ನೇ ನೋಡುತ್ತ ನನ್ನ-ನಿನ್ನ ಪರವಾಗಿ ಅರ್ಘ್ಯವರ್ಪಿಸಿದೆ.

ಈ ರಕ್ತ,ಮಾಂಸ ತೊಗಲಿನ ಅರಿವೆ ಅಳಿಯುವವರೆಗೂ ನಿನ್ನ ಪಾಲಿನ ಅರ್ಘ್ಯವಿನ್ನು ಈ ಬೊಗಸೆಯಿಂದಲೇ ಅಪ್ಪ....

Sunday 3 April 2016

ದೀಪದಂತ ದಿನು....


ಲೋ ದಿನು ನಮಗಿಬ್ಬರಿಗೆ ಇಂದೆನೋ ಖುಷಿ ಖುಷಿ. ಅಮೂರ್ತ ಮನಸ್ಸುಗಳಲ್ಲಿ ಹಬ್ಬದ ವಾತಾವರಣ. ಆಗಾಗ ಬರೋ ಹಬ್ಬಗಳಿಗಿಂತ ಇಂದೆಕೋ ತುಸು ಖುಷಿ ಜಾಸ್ತಿ.ಭಾವನಾಲೋಕದಲ್ಲಿ ಹೇಳಲಾಗದ ನಲಿವುಗಳ ತೀವ್ರತಮ ಗದ್ದಲ. ಸಡಗರದ ಸಂಭ್ರಮ. ಎದೆಬಡಿತದಲ್ಲೊಂದು ಪಿಸುಮಾತು.ಅದೇನಿರಬಹುದೆಂದು ನಿರ್ಜನ ಕೋಣೆಗೆ ಹೋಗಿ ಕಿವಿಗೊಟ್ಟು ಆಲಿಸಿದಾಗ ಕೇಳಿಸಿದ್ದು,,,, ನಮ್ಮ ದಿನು ನಿನ್ನ ನವ ಜನ್ಮದಿನ ನಿನಗೆ ನೀ ಬಯಸಿದ ಎಲ್ಲವನ್ನು ನೀಡಲಿ...

ನಿನ್ನ ಜೀವನದಲ್ಲಿ ಹೊಸದೊಂದು ವಸಂತ ಪ್ರಾರಂಭವಾಗಿದೆ. ನಮಗಾಗಿಯೇ ಹುಟ್ಟಿಬಂದ ನಿಷ್ಕಲ್ಮಶ ಜೀವ ನೀ ಎಂದು ನಾವು ಭಾವಿಸಿದ್ದೇವೆ.ನಿನ್ನನ್ನು ನೆನಪಿಸಿದರೆ ಪದಗಳಲ್ಲಿ ಕಟ್ಟಲಾಗದ ಏನೇನನ್ನೋ ಧುತ್ತೆಂದು ತಂದು ನಿಲ್ಲಿಸುತ್ತಿದ್ದ ಮನಸ್ಸಿನಲ್ಲಿ ಇಂದು ನಡೆಯುತ್ತಿರುವುದು...ಭಾವನೆಗಳ ನಿಲ್ಲಲಾರದ ನರ್ತನ..ಸ್ನೇಹದ ಹೆಜ್ಜೆಗಳ ಅಪರೂಪದ ತಕಧಿಮಿತ...ಅದು ಸಹ ಕೇವಲ ದಿನು ಎಂಬ ಹೆಸರಿಗೆ ಸೀಮಿತವಾಗಿರುವ ಸರಿಗಮಕೆ......

ಬುದ್ಧಿ ಬರುವ ವಯಸ್ಸಲ್ಲೇ ಬರಡಾಗಿದ್ದ ನಮ್ಮ ಬದುಕಲ್ಲಿ ನೀ ಬಂದಿದ್ದು ಅಕ್ಷರಶಃ ಪವಿತ್ರ, ನಿರ್ಮಲ ನದಿಯಾಗಿ ಹರಿದು. ಹತಾಶೆಯ ಉರಿ ಬಿಸಿಲಲ್ಲಿ ತಲೆ ತಗ್ಗಿಸಿ ನಡೆಯುತ್ತಿದ್ದಾಗ ಓಡಿ ಬಂದು ನಮ್ಮಿಬ್ಬರಿಗೆ ಕೊಡೆ ಹಿಡಿದಿದ್ದು ನೀನೇ ಗೆಳೆಯ... ಆತ್ಮೀಯತೆಯ ತಂಗಾಳಿಯಾಗಿ ಹೃದಯವನ್ನು ಸ್ಪರ್ಶಿಸಿದ್ದು ನೀನೇ... .ಇಳಿ ಬಿಟ್ಟ ತೋಳುಗಳನ್ನು ಗಟ್ಟಿಯಾಗಿ ಹಿಡಿದು, ಅಂಗೈಯನ್ನು ನಿಧಾನವಾಗಿ ಅಮುಕಿ ನಾನಿದ್ದೇನೆ ನಿಮ್ಮ ಜತೆ ಎಂದು ನಮ್ಮಲ್ಲಿ ನಾವಾಗಿ ಬೆರೆತವನೂ ನೀನೆ...ಅಣ್ಣನಾಗಿ, ಗೆಳೆಯನಾಗಿ ಸದಾ ಜತೆ ನಡೆಯುವವನೂ ನೀನೇ...

ಇಂದು ನಿನ್ನ ಹುಟ್ಟಿದ ದಿನವನ್ನು ವಿಶಿಷ್ಠ ಚೇತನ ಮಕ್ಕಳ ಜತೆ ಕಳೆದಿದ್ದು, ನಿನ್ನ ಬಗೆಗಿನ ಗೌರವವನ್ನು ಇನ್ನೂ ಇಮ್ಮಡಿಸಿದೆ.
ಒಂದೇ ಆಗಿರುವ ನಮ್ಮ ಆದರ್ಶ, ಗುರಿಗಳ ಜತೆ ಜೀವನದುದ್ದಕ್ಕೂ ಜತೆಯಾಗಿ ಮುನ್ನಡೆಯೋಣ ........... ಮೈತ್ರಿಗೊಂದು ಹೊಸ ಪರಿಭಾಷೆ ಬರೆಯುತ್ತಾ.....

ದಿನಪ್ರತಿದಿನ ನೀಲಗಿರಿಯಂತೆ ಬಾನೆತ್ತರಕ್ಕೆ ಬೆಳೆಯುತ್ತಿರುವ ನಿನ್ನ ನೇಹದ ನೆರಳಲ್ಲಿ ನಮ್ಮ ಬದುಕಿರಲಿ...
ನೀನಿತ್ತ ಪ್ರೀತಿಗೆ ನಾವು ಸದಾ ನತಮಸ್ತಕರು...
.
ಜನ್ಮದಿನದಂದು ಹೇಳತೀರದಷ್ಟು ಶುಭಕಾಮನೆಗಳು ..ಆಳವರಿಯದ ಅನುರಾಗದಿಂದ....
ನಿನ್ನ ಸ್ನೇಹದ ಸಾಲುದೀಪ...

ತಲೆ ಬಿಸಿ...


ಅಮ್ಮ ಯಾಕೋ ಒಂದೇ ಸಮನೆ ಒದಿತಿದ್ದಾಳೆ. ನಂಗೋ ಹಸಿವನ್ನಾ ತಡಯೋಕಾಗತಿಲ್ಲ....ಕುಡ್ಸಿದ್ಲಪ್ಪಾ ಒಂದ್ ಅರ್ಧ ಗಂಟೆ ಅಷ್ಟೇ.... ನಾನು ಎರಡು ರೌಂಡು ಜಿಗಿದು ವಾಪಸ್ ಬಂದನಪ್ಪಾ.. ಒಂದ ಬೇರೆ ಆಯ್ತು...ಮತ್ತೆ ಹಸಿವು..ಹೊಟ್ಟೆ ಚುರ್ರ್ ಅಂತಿದೆ.. ಬಾಯಲ್ಲಿ ಹಾಲಿನಂತದೇ ಜೊಲ್ಲು ಬೇರೆ... ಚೂರೇ ಚೂರು ಕೊಡೆ.. ಆಶೆ ಆಗ್ತಿದೆ... ಅಂದ್ರೆ ಕೇಳ್ಸಕೋತಿಲ್ಲ ಮಹಾರಾಯ್ತಿ...ಕಿವಿನೇ ಕೇಳಸಲ್ಲ ಅನ್ನೋ ಹಾಗೆ ನಿಂತಿದ್ದಾಳೆ.. ತಾನು ಹುಲ್ಲ ತಿನ್ತಾ....... ಹೆಂಗ ಅರ್ಥ ಮಾಡಿಸ್ಲಿ ಇವಳಿಗೆ..ಆ ಅಕ್ಕ ಬಂದು ಜಿರಿಗೆ ಕಷಾಯ ಬೇರೆ ಕುಡಿಸ್ತಾಳೆ.. ಅದು ವ್ಯಾಕ್ ಅನ್ನಿಸೋ ಹಾಗಿರತ್ತೆ...ಅದೊಂದ ಟೆನ್ಸನ್..ನನ್ನ ಮುದ್ದ ಮುಖ ನೋಡು ಪಾಪ ಅನ್ನಿಸಲ್ವಾ...

ದಿನು ಅಣ್ಣನ ಹುಟ್ಟಿದಹಬ್ಬ ಇವತ್ತು. ಇನ್ನೂ ವಿಷ್ ಮಾಡಿಲ್ಲ.. ಒಂದ ಪೆಪ್ಪರಮೆಂಟ್ ಆದ್ರೂ ಕೊಟ್ಟ ಬರ್ತಿನಿ... ನಂಗ ಅವ್ನು ಲಾಲಿಪಾಪ್ ಆದ್ರೂ ಕೊಡ್ಸತಾನೆ... ಆದ್ರೆ ಜಪ್ಪಯ್ಯ ಅಂದ್ರು ಇವ್ಳು ಕುಡಿಸೋದ ಕಾಣಸಲ್ಲ... ಏನ್ ಮಾಡೋದು.... ಛೇ.....ತಲೆ ಬಿಸಿ ಆಗ್ತಿದೆ...

ಅಮ್ಮನಂತ ವಿಶಾಲ..... ಮಗುವಿನಂತ ಮುಗ್ಧ ಮನಸಿನ ಗೆಳೆಯ...


ರಂಗು ರಂಗಿನ ಹೋಳಿಯಲಿ ಮಿಂದೆದ್ದು ನಿನ್ನ ಜನ್ಮದಿನವನ್ನಾಚರಿಸುವ ಸಂಭ್ರಮ. ಬದುಕಿನ ರಂಗಿನಾಟದಲಿ ನಮ್ಮದೊಂದೇ ಬಣ್ಣ. ಅದು ಸ್ನೇಹದ ಬಣ್ಣ... ನಮ್ಮ ನಡುವಿರುವ ಬಿಗಿಯಾದ ಭಾವಲೋಕದಲ್ಲಿ ಮಾತ್ರ ಬಣ್ಣಗಳ ಎರೆಚಾಟ. ನೀ ನಮಗೆ ಕೊಟ್ಟಿದ್ದು ಲೆಕ್ಕವಿಲ್ಲದಷ್ಟು. ಆದರೆ, ನೀ ಕೇಳೋದು ಒಂದೇ... ಮಗು ತಿಂಡಿ ಕೊಡುತ್ತಾರೆ ಎಂದು ಗೊತ್ತಿದ್ದರೂ ಮತ್ತೆ ಕೇಳುವ ಹಾಗೆ. ಏನೇನೋ ಗೀಚುತಿರ್ತೀರಾ, ನನ್ನ ಬಗ್ಗೆನೂ ಒಂದೆರಡು ಸಾಲು ಬರೀರಾ ಮಾರಾಯ್ರೇ... ಹ್ಹಹ್ಹಹ್ಹ.. ನೀ ಹೇಳಿಯೇ ನಾವದನ್ನು ಮಾಡಬೇಕೆನೋ....
ಆದರೆ ನಿನ್ನ ಬಗ್ಗೆ ಹೇಳಹೊರಟರೆ ಭಾವನೆಗಳ, ಅಕ್ಷರಗಳ ಲೋಕ ಧುತ್ತೆಂದು ಮರೆಯಾಗಿ ಬಿಡುತ್ತದೆ. ಕಾರಣ ಅಕ್ಷರಗಳಿಗೆ ತಾವು ಸೋತು ಹೋಗುತ್ತೇವೆಂಬ ಭೀತಿ. ಹಾಗಿರುವಾಗ ಏನನ್ನು ಬರೆಯೋಣ. ಏನನ್ನು ಹೇಳೋಣ. ಆದರೂ ನಮ್ಮ ಸಮಾಧಾನಕ್ಕೆ, ನಿನ್ನ ಸಮಾಧಾನಕ್ಕೆ ಬರೆಯಬೇಕಷ್ಟೇ.
ಸ್ನೇಹಿತರು, ಆತ್ಮೀಯ ಸಂಬಂಧವನ್ನು ಹೊಂದಿರುವವರು ಸಾಯುವವರೆಗೂ ಜತೆಯಾಗಿರುವ ಸಂಕಲ್ಪವನ್ನು ಹೊತ್ತಿರುತ್ತಾರೆ. ನಮ್ಮ ಯಾನ ಈ ಜೀವನ ಅಂತ್ಯವಾಗುವರೆಗೆ ಇರಲಿ ಎಂಬ ಪುಟ್ಟ ಆಸೆಯಂತೂ ನಮಗಿಲ್ಲ. ಈ ಲೋಕದ ಆಚೆಗಿದೆ ಎಂದು ನಾವು ಅಂದುಕೊಂಡಿರುವ ಲೋಕದಲ್ಲೂ ನಾವು ಜತೆಯಾಗೆ ಸಾಗುತ್ತೇವೆ, ಜತೆಯಾಗೇ ಬದುಕುತ್ತೇವೆ..ಅಲ್ವಾ ಗೆಳೆಯಾ...?
ನಿನಗೇನು ಕೊಡಬೇಕೋ ನಾವು ಅಂದರೆ, 'ನನ್ನ ಬಳಿ ದೊಡ್ಡದೆರಡು ಉಡುಗೊರೆಗಳಿವೆ.. ಅದಕ್ಕೆ ಸಾಟಿ ಇಲ್ಲ. ಮತ್ತೇನ ಕೇಳಲಿ' ಎಂದು ಬಾಯಿ ಮುಚ್ಚಿಸುತ್ತೀಯಾ. ಅಪ್ಪ-ಅಮ್ಮನ ಹಿಂದಿನ ಸಾಲಲ್ಲಿ ಬಲವಂತವಾಗಿ ಎಳೆದೊಯ್ದು ನಿಲ್ಲಿಸುತ್ತೀಯಾ. ಆ ಜಾಗಕ್ಕೆ ನಾವೇನು ಅರ್ಹರಲ್ಲ. ಆದರೆ ನಮ್ಮ ಮೇಲಿನ ಹುಚ್ಚು ಪ್ರೀತಿ ನಿನಗೆ ಹಾಗೆ ಮಾಡಿಸುತ್ತದೆ ಅಷ್ಟೇ. ಆದರೆ, ನಮಗೆ ನೀ ಅಪ್ಪಾ... ಅಮ್ಮ... ಅಣ್ಣಾ.....ಪ್ರೀತಿ... ಗೆಳೆಯಾ.... ಇದು ನಿಲ್ಲದ್ದು. ಜಗತ್ತು ಗುರುತಿಸಿರೋ ಸಂಬಂಧಗಳಷ್ಟೇನಾ ನೀ...? ನಿಜವಾಗಿಯೂ ಇಲ್ಲ; ಅದೆಲ್ಲವನ್ನು ಮೀರಿದ್ದು....!
ಅಗಾಧ ಶ್ರಮ ಹಾಕಿ ಕಂಡ ಕನಸು ನನಸು ಮಾಡಿಕೊಂಡು, ಇಷ್ಟ ದೇವರ ದರ್ಶನ ಮಾಡಿ, ಸಂಪತ್ತು ಕೂಡಿ ಹಾಕಿ.. ಹೀಗೆಲ್ಲ ಏನೇನೋ ಕಾರಣಕ್ಕೆ ಜನ್ಮ ಸಾರ್ಥಕವಾಯಿತೆನ್ನುತ್ತಾರೆ. ಆದರೆ ನಮ್ಮ ಜೀವನ ಸಾರ್ಥಕವಾಗಿದ್ದು ನಿನ್ನ ಪಡೆದಾಗಲೇ...ಈ ಬಾಳ ರಥವನ್ನು ಎಳೆದೊಯ್ಯುತ್ತಿರುವುದು ನಮ್ಮ ನಡುವಿರುವ ವಿಶಾಲ ವಿಶ್ವಾಸದ ಹಗ್ಗ.
ಈ ಜನ್ಮದಿನ ನಿನ್ನ ಮೂರ್ನಾಲ್ಕು ವರ್ಷಗಳ ಬಹುದೊಡ್ಡ ಚಿಂತೆಯನ್ನು ನೀಗಿಸಲಿ ಗೆಳೆಯಾ. ನಿನ್ನ ಸಂತೋಷ ನೋಡಿ ಕಣ್ತುಂಬಿ ಕೊಳ್ಳೋ ಭಾಗ್ಯವೊಂದು ನಮಗಿರಲಿ. ಸರ್ವಾಂತರ್ಯಾಮಿ ಸರ್ವ ಸೌಭಾಗ್ಯವನ್ನು ನಿನಗೆ ನೀಡಲಿ 'ಬಾಡ'ದ ಹುಡುಗಾ...
ನಮಗಾಗಿ ನೀ ಕಾಯಲು ಪ್ರಾರಂಭಿಸಿದ ದಿನದ ಶುಭಾಶಯಗಳು ...
"ಪದಕೋಶದಂತೆ ಬದುಕಬೇಕು" ಎಂದು ಹೇಳುತ್ತಾರೆ. ಯಾರ್ಯಾರು ನಮ್ಮನ್ನು ಸಂಪರ್ಕಿಸುತ್ತಾರೋ, ಭೇಟಿಯಾಗುತ್ತಾರೋ, ಅವರೆಲ್ಲರಿಗೂ ನಾವು ಅರ್ಥ ನೀಡಬೇಕು. ಅವರ ಗೊಂದಲಗಳಿಗೆ ಪರಿಹಾರ ಆಗಬೇಕು, ಅವರ ಬದುಕಿಗೆ ಅರ್ಥ ಕೊಡುವಂತಾಗಬೇಕು. ಪ್ರಯತ್ನಿಸೋಣ.....